ಸಿಎಂ ಸಿದ್ದರಾಮಯ್ಯ ಅವರ 17ನೇ ಬಜೆಟ್ : ಸಿನಿಮಾ ಕ್ಷೇತ್ರಕ್ಕೆ ಬಂಪರ್ ಘೋಷಣೆ

ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಿನಿಮಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಚಿತ್ರಗಳಿಗೆ ನೀಡುವ ಸಬ್ಸಿಡಿಗೆ 20 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.

ಕೆಲವು ತಿಂಗಳುಗಳಿಂದ ಚಿತ್ರರಂಗದಲ್ಲಿ ಸಬ್ಸಿಡಿ ನಿಲ್ಲಿಸುವ ಬಗ್ಗೆ ಹಲವು ಊಹಾಪೋಹಗಳು ಹಾಗೂ ಚರ್ಚೆಗಳು ನಡೆಯುತ್ತಿದವು. ಆದರೆ ಅವೆಲ್ಲಕ್ಕೂ ತೆರೆ ಎಳೆದಂತೆ, 17ನೇ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು 20 ಕೋಟಿ ರೂಪಾಯಿ ಅನುದಾನ ಘೋಷಿಸಿ ಕನ್ನಡ ಚಿತ್ರರಂಗಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಗುಣಾತ್ಮಕ ಕನ್ನಡ ಚಿತ್ರಗಳಿಗೆ ನೀಡುತ್ತಿದ್ದ ಸಹಾಯಧನ ಸ್ಥಗಿತಗೊಂಡಿತ್ತು. ಇದೀಗ ಗುಣಮಟ್ಟದ ಸಿನಿಮಾಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಮತ್ತೊಮ್ಮೆ ಸಬ್ಸಿಡಿ ನೀಡಲು ಮುಂದಾಗಿದೆ.

2026 ರ ಬಜೆಟ್‌ನಲ್ಲಿ ಸಿನಿಮಾ ಕ್ಷೇತ್ರಕ್ಕೆ ದೊರೆತ ಪ್ರಮುಖ ಘೋಷಣೆಗಳು

1. “ಸಿನಿ ಮಿತ್ರ” ಡಿಜಿಟಲ್ ವ್ಯವಸ್ಥೆ

ಚಿತ್ರಕರ್ಮಿಗಳು ಚಿತ್ರೀಕರಣಕ್ಕೆ ವಿವಿಧ ಇಲಾಖೆಗಳ ಅನುಮತಿ ಪಡೆಯಲು ಪರದಾಡುವ ಪರಿಸ್ಥಿತಿ ಇದ್ದಿತು. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ “ಸಿನಿ ಮಿತ್ರ” ಎಂಬ ಆನ್‌ಲೈನ್ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.

2. ಕರ್ನಾಟಕ ಫಿಲ್ಮ್ ಲೊಕೇಶನ್ ಡಿಜಿಟಲ್ ಮ್ಯಾಪ್

ರಾಜ್ಯದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಚಿತ್ರೀಕರಣ ಸ್ಥಳಗಳ ಮಾಹಿತಿಯನ್ನು ಒಳಗೊಂಡ “ಕರ್ನಾಟಕ ಫಿಲ್ಮ್ ಲೊಕೇಶನ್ ಡಿಜಿಟಲ್ ಮ್ಯಾಪ್” ಅನ್ನು ಅಭಿವೃದ್ಧಿಪಡಿಸಲು 1 ಕೋಟಿ ರೂಪಾಯಿ ಮೀಸಲಿಡಲಾಗಿದೆ.

3. ಸಬ್ಸಿಡಿಗೆ 20 ಕೋಟಿ ರೂ.

ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುಣಾತ್ಮಕ ಚಿತ್ರಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಪುನಃ ಆರಂಭಿಸಲು ೨೦ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಲಾಗಿದೆ.

4. “ಡಿಜಿಟಲ್ ದೃಶ್ಯ ಕರ್ನಾಟಕ”

ಚಿತ್ರ ಮತ್ತು ವಿಡಿಯೋ ಡಾಕ್ಯುಮೆಂಟರಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ “ಡಿಜಿಟಲ್ ದೃಶ್ಯ ಕರ್ನಾಟಕ” ಎಂಬ ವೇದಿಕೆಯನ್ನು ನಿರ್ಮಿಸಲು 5 ಕೋಟಿ ರೂಪಾಯಿ ನೀಡಲಾಗುತ್ತದೆ.

5. ಮೈಸೂರು ಫಿಲ್ಮ್ ಸಿಟಿ ಯೋಜನೆ

ಈ ಹಿಂದೆ ಅನುಮೋದನೆ ಪಡೆದ 500 ಕೋಟಿ ರೂಪಾಯಿ ವೆಚ್ಚದ ಮೈಸೂರು ಫಿಲ್ಮ್ ಸಿಟಿ ಯೋಜನೆಯನ್ನು ಮುಂದುವರೆಸಲಾಗುತ್ತಿದೆ. ಇದರಲ್ಲಿ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಂತಹ ಪ್ರವಾಸೋದ್ಯಮ ಸೌಲಭ್ಯಗಳನ್ನು PPP ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

6. ಪುಟ್ಟಣ್ಣ ಕಣಗಾಲ್ ಮನೆ ಮ್ಯೂಸಿಯಂ

ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸಲು ಸರ್ಕಾರ ಯೋಜಿಸಿದೆ.

Leave a Comment

Your email address will not be published. Required fields are marked *

Scroll to Top